ಕೃಷಿಹೊಂಡದಲ್ಲಿ ಮಕ್ಕಳ ಸಾವು ಆತಂಕಕಾರಿ : ಡಾ.ತಿಪ್ಪೇಸ್ವಾಮಿ ಕೆ.ಟಿ.
ನೀರಿನಲ್ಲಿ ಬಿದ್ದು ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲೂ ಕೃಷಿಹೊಂಡದಲ್ಲಿ ಬಿದ್ದು ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.
ನಾನು ಇತ್ತೀಚೆಗೆ ಚಿತ್ರದುರ್ಗ, ತುಮಕೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಕ್ಕಳ ಅಸಹಜ ಸಾವು ತಪ್ಪಿಸುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಿದ್ದೆ. ಅದರ ಮುಂದುವರೆದ ಭಾಗವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯಾದರ್ಶಿಗಳಿಗೆ ಪತ್ರ ಬರೆದು ಕೃಷಿಹೊಂಡಗಳ ನಿರ್ಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಕೋರಿದ್ದೆ.
ಈಗ ಕೃಷಿಹೊಂಡಗಳ ಸುತ್ತಾ ತಂತಿ ಬೇಲಿ ನಿರ್ಮಾಣ ಮಾಡುವುದು, ಹಗ್ಗ ಬಿಡುವುದು ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲು ಇಲಾಖೆ ಸುತ್ತೋಲೆ ನೀಡಿದೆ.
ಕೆಲವು ಜಿಲ್ಲೆಗಳನ್ನು ಇದು ಕಟ್ಟುನಿಟ್ಟಾಗಿ ಜಾರಿಯಾಗಿದೆ. ನಾನು ನಿನ್ನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಪ್ರವಾಸದಲ್ಲಿದ್ದೆ. ಈ ಹಿನ್ನೆಲೆಯಲ್ಲಿ ರೈತರೊಬ್ಬರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ನೀಡಿರುವ ಕೃಷಿಹೊಂಡವನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದೆ. ಸದರಿ ಹೊಂಡ ಆಳವಾಗಿ ಹಾಗೂ ಹೆಚ್ಚು ವಿಸ್ತಾರವಾಗಿದೆ. ನಿಯಮಾನುಸಾರ ರಕ್ಷಣಾ ಕ್ರಮ ಅನುಸರಿಸಿಲ್ಲದಿರುವುದನ್ನು ಗಮನಿಸಿದೆ. ಈ ಸಂಬಂಧ ಸೂಕ್ತಕ್ರಮಕೈಗೊಳ್ಳಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ.
ದಯವಿಟ್ಟು ಅಧಿಕಾರಿಗಳು ಹಾಗೂ ರೈತರು ಕೃಷಿಹೊಂಡಗಳಲ್ಲಿ ಸುರಕ್ಷತೆಯನ್ನು ಕಾಪಾಡಿ ಅಮಾಯಕ ಮಕ್ಕಳ ಜೀವ ಉಳಿಸಿ.
ವಂದನೆಗಳು
ಡಾ.ತಿಪ್ಪೇಸ್ವಾಮಿ ಕೆ.ಟಿ.
ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಬೆಂಗಳೂರು.

Comments
Post a Comment