ಟೈಪ್-1 ಮಧುಮೇಹ ಪೀಡಿತ ಮಕ್ಕಳಿಗೆ ಉಚಿತ ಇನ್ಸುಲಿನ್ ನೀಡಿ: ಡಾ.ತಿಪ್ಪೇಸ್ವಾಮಿ ಕೆ.ಟಿ.

 


ರಾಜ್ಯದ ಟೈಪ್-1 ಮಧುಮೇಹ ಪೀಡಿತ ಮಕ್ಕಳಿಗೆ ಉಚಿತ ಇನ್ಸುಲಿನ್ ಮತ್ತು ಟೆಸ್ಟಿಂಗ್ ಸ್ಟ್ರಿಪ್‌ಗಳನ್ನು ಒದಗಿಸಲು ಸರ್ಕಾರಕ್ಕೆ ಒತ್ತಾಯ

ರಾಜ್ಯದಲ್ಲಿ ಟೈಪ್-1 ಮಧುಮೇಹದಿಂದ (Type-1 Diabetes) ಬಳಲುತ್ತಿರುವ ಸಾವಿರಾರು ಮಕ್ಕಳ ಜೀವನ ರಕ್ಷಣೆಯ ದೃಷ್ಟಿಯಿಂದ ಸರ್ಕಾರವು ತಕ್ಷಣವೇ ಉಚಿತ ಇನ್ಸುಲಿನ್ ಮತ್ತು ಗ್ಲುಕೋಮೀಟರ್ ಟೆಸ್ಟಿಂಗ್ ಸ್ಟ್ರಿಪ್‌ಗಳನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ  ಅರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುವ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಟೈಪ್-1 ಮಧುಮೇಹವು ಮಕ್ಕಳಲ್ಲಿ ಕಂಡುಬರುವ ಒಂದು ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿದ್ದು, ಬದುಕಲು ಅವರು ಜೀವಮಾನ ಪೂರ್ತಿ ಇನ್ಸುಲಿನ್ ಚುಚ್ಚುಮದ್ದಿನ ಮೇಲೆ ಅವಲಂಬಿತರಾಗಬೇಕಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರತಿ ತಿಂಗಳು ಇನ್ಸುಲಿನ್ ಮತ್ತು ರಕ್ತದ ಸಕ್ಕರೆ ಪರೀಕ್ಷೆಯ ಸ್ಟ್ರಿಪ್‌ಗಳಿಗಾಗಿ 5000 ದಿಂದ 7000 ರೂಪಾಯಿಗಳವರೆಗೆ ವೆಚ್ಚವಾಗುತ್ತಿದೆ. ಈ ಆರ್ಥಿಕ ಹೊರೆಯನ್ನು ಭರಿಸಲಾಗದೆ ಅನೇಕ ಪೋಷಕರು ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವ ಅಥವಾ ಅರೆಬರೆ ಚಿಕಿತ್ಸೆ ನೀಡುವ ಸ್ಥಿತಿ ನಿರ್ಮಾಣವಾಗಿದೆ, ಇದು ಮಕ್ಕಳ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಟೈಪ್-1 ಮಕ್ಕಳಿಗೆ ಅಗತ್ಯವಿರುವ ಗುಣಮಟ್ಟದ ಇನ್ಸುಲಿನ್ ಅನ್ನು ಸಂಪೂರ್ಣ ಉಚಿತವಾಗಿ ನೀಡಬೇಕು ಹಾಗೂ ಸಕ್ಕರೆ ಪ್ರಮಾಣವನ್ನು ನಿಖರವಾಗಿ ಪರೀಕ್ಷಿಸಲು ಪ್ರತಿ ಮಗುವಿಗೆ ಉಚಿತ ಗ್ಲುಕೋಮೀಟರ್ ಮತ್ತು ಮಾಸಿಕ ಅಗತ್ಯಕ್ಕೆ ತಕ್ಕಷ್ಟು ಟೆಸ್ಟಿಂಗ್ ಸ್ಟ್ರಿಪ್‌ಗಳನ್ನು ಒದಗಿಸಬೇಕು ಎಂದಿದ್ದಾರೆ. 

ಮುಂದುವರೆದು ಭಾರತದ ಸಂವಿಧಾನದ ವಿಧಿ 21 ಮತ್ತು 'ವಿಕಲಚೇತನರ ಹಕ್ಕುಗಳ ಕಾಯಿದೆ 2016'ರ ಅನ್ವಯ ಮಕ್ಕಳಿಗೆ ಜೀವ ಉಳಿಸುವ ಔಷಧಗಳನ್ನು ಒದಗಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಜೊತೆಗೆ ನೆರೆಯ ಕೇರಳ ರಾಜ್ಯದ 'ಮಿಠಾಯಿ' ಯೋಜನೆಯ ಮಾದರಿಯಲ್ಲಿ ಕರ್ನಾಟಕದಲ್ಲೂ ಒಂದು ಸಮಗ್ರ ಯೋಜನೆಯನ್ನು ರೂಪಿಸುವ ಮೂಲಕ ಸಾವಿರಾರು ಬಡ ಕುಟುಂಬಗಳ ಕಣ್ಣೀರು ಒರೆಸಬೇಕು. ಆರೋಗ್ಯ ಇಲಾಖೆ ಈ ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದರು. ಹಣದ ಕೊರತೆಯಿಂದಾಗಿ ಯಾವುದೇ ಮಗುವಿನ ಅರೋಗ್ಯ ಹಕ್ಕು ಉಲ್ಲಂಘನೆಯಾಗಬಾರದು . ಸರ್ಕಾರವು ವಿಳಂಬ ಮಾಡದೆ ಈ ಮಾನವೀಯ ಬೇಡಿಕೆಯನ್ನು ಈಡೇರಿಸಬೇಕು ಎಂದು ಡಾ.ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ. 



Comments

Popular posts from this blog

ಮಕ್ಕಳ ಹಕ್ಕುಗಳ ಸಾಕಾರಕ್ಕೆ ಬೇಕಿದೆ; ಗ್ರಾಮಾಡಳಿತದ ಸ್ಪಂದನೆ.