ವಿದ್ಯಾರ್ಥಿ ಸ್ನೇಹಿ ಸಾರಿಗೆ ನೀತಿ ರೂಪಿಸಲು ಏಕಿಷ್ಟು ಮೀನಾಮೇಷ???
ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಸರ್ಕಾರ ಈ ಹಿನ್ನೆಲೆಯಲ್ಲಿ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2006’ಅನ್ನು ಜಾರಿಗೆ ತಂದಾಗಿದೆ. ಕಾಯಿದೆ ಜಾರಿಯಾದ ಮಾತ್ರಕ್ಕೆ ಹಕ್ಕು ಸಂಬಂದಿಸಿದವರಿಗೆ ತಲುಪಿದಂತಾಗುವುದಿಲ್ಲ. ಕಾಯಿದೆಯ ಅನುಷ್ಟಾನಕ್ಕೆ ಪೂರಕವಾದ ವ್ಯವಸ್ಥೆಗಳು ರಚನೆಯಾಗಬೇಕು ಮತ್ತು ಅವು ಕ್ರಿಯಾಶೀಲವಾಗಿ ಕೆಲಸಮಾಡಬೇಕು. ಇಂತಹ ಹಲವು ವ್ಯವಸ್ಥೆಗಳಲ್ಲಿ ಸಾರಿಗೆ ವ್ಯವಸ್ಥೆ ಕೂಡ ಮಹತ್ವದ್ದು. ಶಿಕ್ಷಣದ ಸಮಾನ ಅವಕಾಶಗಳು ಎಲ್ಲಾ ಮಕ್ಕಳಿಗೂ ಲಭ್ಯವಾಗಬೇಕಾದರೆ ಸಾರಿಗೆ ವ್ಯವಸ್ಥೆ ಅತಿಮುಖ್ಯ. ಅದರಲ್ಲೂ ಬಡತನರೇಖೆಗಿಂತ ಕೆಳಗಿನ ಹಾಗೂ ಮಧ್ಯಮ ವರ್ಗದ ಕುಟುಂಬದ ಮಕ್ಕಳು ಶಿಕ್ಷಣ ಪಡೆಯಲು ಹಾಗೂ ಅವರ ಉನ್ನತ ಶಿಕ್ಷಣದ ಕನಸು ನನಸಾಗಿಸಿಕೊಳ್ಳಲು ಸಾರ್ವಜನಿಕ ಸಾರಿಗೆ ನಿರ್ಣಾಯಕ ಪಾತ್ರವಹಿಸುತ್ತದೆ.
ಕರ್ನಾಟಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಶಾಲಾ-ಕಾಲೇಜುಗಳಿಗೆ ತೆರಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಅವಲಂಬಿಸಿದ್ದಾರೆ. ಶಿಕ್ಷಣದ ಮಹತ್ವವನ್ನು ಮನಗಂಡು ಸರಕಾರವು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್, ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಸರ್ಕಾರದ ಈ ನಡೆ ಶ್ಲಾಘನೀಯವಾಗಿದ್ದು, ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಮತ್ತು ವಿದ್ಯಾರ್ಥಿಗಳು ಆರ್ಥಿಕಹೊರೆಯಿಂದಾಗಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತದೆ. ಆದಾಗ್ಯೂ, ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ಈ ಯೋಜನೆಗಳ ಫಲ ವಿದ್ಯಾರ್ಥಿ ಸಮೂಹಕ್ಕೆ ಸರಿಯಾಗಿ ದೊರೆಯುತ್ತಿಲ್ಲದಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ.
ಬಸ್ ಪಾಸ್ ಪಡೆದ ವಿದ್ಯಾರ್ಥಿಗಳ ಸಂಖ್ಯೆಗೂ ಆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಬಸ್‌ಗಳು ನಿಗದಿತ ಸಮಯಕ್ಕೆ ಬಾರದೆ ವಿದ್ಯಾರ್ಥಿಗಳ ದಿನಚರಿ ಅಸ್ತವ್ಯಸ್ತಗೊಳ್ಳುತ್ತಿರುವುದು ಗಮನಾರ್ಹ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಕಷ್ಟಸಾಧ್ಯ. ಇದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ವಿರಸಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಅವರ ವಿಧ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಇದು ದಿನದ ಮೊದಲ ತರಗತಿಗೆ ವಿದ್ಯಾರ್ಥಿಯೊಬ್ಬ ಗಡಿಬಿಡಿಯ, ಅಸಮಧಾನದ ಮನೋಭಾವದಿಂದ ಆಗಮಿಸುವ ಪ್ರತಿಕೂಲ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ. ಇದನ್ನು ಓದಿದಾಗ ಬಹಳ ಸರಳ ವಿಚಾರವೆನಿಸಿದರೂ ಕೂಡ ಅನುಭವಿಸುವ ವಿದ್ಯಾರ್ಥಿಗೆ ದೊಡ್ಡಮಟ್ಟದ ಒತ್ತಡವನ್ನು ತಂದೊಡ್ದುತ್ತದೆ.
ಇನ್ನು ಹಾಗೂಹೀಗೋ ಬಸ್ ಹಿಡಿದು ಹತ್ತಿದರೆ ಅತಿಯಾದ ಜನದಟ್ಟಣೆಯಿಂದಾಗಿ ಹಲವಾರು ಅಪಾಯಕಾರಿ ಘಟನೆಗಳಿಗೆ ಕಾರಣವಾಗಿದೆ, ನಿಲ್ಲಲ್ಲೂ ಕೂಡ ತಾವಿಲ್ಲದ ಆ ಬಸ್ ನಲ್ಲಿ ವಿದ್ಯಾರ್ಥಿಗಳು ಆಗಾಗ್ಗೆ ಫುಟ್‌ಬೋರ್ಡ್ಗಳ ಮೇಲೆ ನಿಲ್ಲುವ ಪರಿಸ್ಥಿತಿ ಇದೆ. ಇದರಿಂದಾಗಿ ಮಕ್ಕಳು ಚಲಿಸುವ ಬಸ್‌ಗಳಿಂದ ಬಿದ್ದು, ಗಾಯಗೊಂಡು, ಕೆಲವು ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡಿರುವ ಭೀಕರ ಅಪಘಾತಗಳು ಸಂಭವಿಸಿವೆ. ಈ ಘಟನೆಗಳು ವಿದ್ಯಾರ್ಥಿಗಳ ಜೀವ ರಕ್ಷಿಸಲು ಸರ್ಕಾರ ಮಧ್ಯಪ್ರವೇಶಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ. ಬಿದ್ದು ಸತ್ತ ಮೇಲೆ ಪರಿಹಾರ ನೀಡುವುದು ಯಾವ ನ್ಯಾಯ?
ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ಬಸ್ ಸಿಬ್ಬಂದಿಯ ವರ್ತನೆಯು ಮತ್ತೊಂದು ನಿರ್ಣಾಯಕ ವಿಷಯವಾಗಿದೆ. ಅಸಭ್ಯ ಮತ್ತು ಅನುಚಿತ ನಡವಳಿಕೆಯ ಹಲವಾರು ವರದಿಗಳು ಬಂದಿವೆ, ವಿದ್ಯಾರ್ಥಿಗಳು ತಮ್ಮ ಪ್ರಯಾಣದ ಸಮಯದಲ್ಲಿ ಈಗಾಗಲೇ ಎದುರಿಸುತ್ತಿರುವ ಒತ್ತಡದ ಪರಿಸ್ಥಿತಿಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ. ಅದರಲ್ಲೂ ಜನದಟ್ಟಣೆಯಲ್ಲಿ ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಗಳ ಸ್ವರೂಪ ಇನ್ನೂ ಕೆಟ್ಟದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರದ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ ಮೇಲೂ ಸಮಸ್ಯೆಗಳೂ ಹಾಗೆಯೇ ಮುಂದುವರೆದಿವೆ. ಇದರ ಪರಿಣಾಮವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲೂ ಹಲವಾರು ದೂರು ದಾಖಲಾಗಿವೆ. ಇದು ವಿದ್ಯಾರ್ಥಿಗಳ ಸಾರಿಗೆ ಸಂಬಂದಿತ ಸವಾಲುಗಳನ್ನು ಪರಿಹರಿಸುವಲ್ಲಿ ಪ್ರಸ್ತುತ ವ್ಯವಸ್ಥೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ರಾಜ್ಯದಲ್ಲಿನ ಇಂತಹ ಘಟನೆಗಳು ಸಾರಿಗೆ ಇಲಾಖೆಯು ಸಮಗ್ರ ಮಕ್ಕಳ ರಕ್ಷಣಾ ನೀತಿಯನ್ನು ಅಳವಡಿಸಿಕೊಳ್ಳಬೇಕಾದ ತೀವ್ರ ಅಗತ್ಯವನ್ನು ಮುನ್ನೆಲೆಗೆ ತಂದಿವೆ. ಅಂತಹ ನೀತಿಯು ವಿದ್ಯಾರ್ಥಿಗಳ ಸುರಕ್ಷತೆ, ಘನತೆ ಮತ್ತು ಹಕ್ಕುಗಳಿಗೆ ಆದ್ಯತೆ ನೀಡಬೇಕು, ಶಾಲೆಗೆ ಹೋಗುವ ಅವರ ಪ್ರಯಾಣವು ಸುರಕ್ಷಿತ ಮತ್ತು ಒತ್ತಡ-ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ಸಿಬ್ಬಂಧಿಗಳಿಗೆ ಸೂಕ್ತ ತರಬೇತಿ ಸಿಗಬೇಕು. ಅದರಲ್ಲೂ ಬಾಲ ನ್ಯಾಯ ಕಾಯಿದೆ, ಪೋಕ್ಸೋ ಕಾಯಿದೆ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾನೀತಿ-2016ರ ಬಗ್ಗೆ ಅರಿವು ಮೂಡಿಸಬೇಕು.
ಸರ್ಕಾರವು ತನ್ನ ನಾಡಿನ ಪ್ರಜೆಗಳ ಹಿತಾಸಕ್ತಿಗಾಗಿ ಹಾಗೂ ಯೋಗಕ್ಷೇಮಕ್ಕಾಗಿ ರೂಪಿಸಿದ ಯೋಜನೆಯೊಂದು ಉದ್ದೇಶಿತ ರೂಪದಲ್ಲಿ ಅನುಷ್ಟಾನವಾಗದೇ ಹೋದಲ್ಲಿ ಅದು ಕೆಟ್ಟ ಹೆಸರುಪಡೆದುಕೊಳ್ಳುತ್ತದೆ ಮತ್ತು ಟೀಕೆಗೆ ಗುರಿಯಾಗುತ್ತದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಈ ಮೇಲಿನ ಎಲ್ಲಾ ಸಾರಿಗೆ ಸಂಬಂದಿತ ಸಮಸ್ಯೆಗಳು ಕೂಡ ನಿಧಾನವಾಗಿ ವಿದ್ಯಾರ್ಥಿ ಸಮೂಹದ ಅಸಹನೆಗೆ ಗುರಿಯಾಗುತ್ತಿವೆ. ನೀಡುವ ಸೇವೆಯು ಸೇವೆಯಾಗಿ ಉಳಿಯಬೇಕೆ ವಿನಹ ಸಮಸ್ಯೆಯಾಗಬಾರದು. ಕೊನೆಗೆ ಕೋಲುಕೊಟ್ಟು ಹೊಡೆಸಿಕೊಂಡಂತಾಗುತ್ತದೆ.
ಅದರಲ್ಲೂ ಈಗ ತಾನೇ ಮನೋಧೋರಣೆಗಳನ್ನು ರೂಪಿಸಿಕೊಳ್ಳುತ್ತಿರುವ ಹಾಗೂ ಭವಿಷ್ಯವನ್ನು ಕಟ್ಟಿಕೊಳ್ಳಲು ತವಕಿಸುತ್ತಿರುವ ಯುವ ಸಮುದಾಯದ ಮನೋಭಾವ ಸಮಾಜ ಮತ್ತು ಪ್ರಭುತ್ವದ ಬಗ್ಗೆ ಸಕಾರಾತ್ಮಕ ಹಾಗೂ ಹಿತಕರವಾಗಿ ರೂಪುಗೊಳ್ಳುವುದು ಅತಿಮುಖ್ಯ. ಅದಕ್ಕಾಗಿ ನಾವೆಲ್ಲರೂ ಉತ್ತಮವಾತಾವರಣ ಹಾಗೂ ಅನುಭವಗಳನ್ನು ಉಂಟುಮಾಡಬೇಕು. ಇದು ಸಾಧ್ಯವಾಗಬೇಕಾದರೆ ಆಡಳಿತ ವ್ಯವಸ್ಥೆ ಸಂವೇದನಾಶೀಲವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದು ಅನಿವಾರ್ಯ.
ಪ್ರಸ್ತುತ ಸಾರಿಗೆ ವ್ಯವಸ್ಥೆಯ ಅಸಮರ್ಪಕತೆಗಳನ್ನು ಪರಿಹರಿಸಲು, ಬಸ್ ಪಾಸ್ ವ್ಯವಸ್ಥೆಯಿಂದ ಉಂಟಾಗುವ ಬೇಡಿಕೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದು, ಸಕಾಲದಲ್ಲಿ ಸೇವೆ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವುದು, ಪ್ರಯಾಣದ ಸಂದರ್ಭಗಳಲ್ಲಿ ಮಕ್ಕಳ ಘನತೆಯನ್ನು ಎತ್ತಿಹಿಡಿಯುವುದು, ಈ ಬಗ್ಗೆ ಸಿಬ್ಬಂಧಿಗಳಿಗೆ ತರಬೇತಿ ನೀಡುವುದು ಅನಿವಾರ್ಯವಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವು ಮೊದಲ ಆದ್ಯತೆಯಾಗಿರಬೇಕು ಮತ್ತು ರಾಜ್ಯದ ಯುವ ನಾಗರಿಕರ ಭವಿಷ್ಯವನ್ನು ಕಾಪಾಡಲು ಕ್ಷಿಪ್ರ ಮತ್ತು ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳುವುದು ಸಾರಿಗೆ ಇಲಾಖೆಯ ಜವಾಬ್ದಾರಿಯಾಗಿದೆ. ಇದೆಲ್ಲಾ ಸಾಧ್ಯವಾಗಲು ಸರ್ಕಾರ ವಿದ್ಯಾರ್ಥಿಸ್ನೇಹಿ ಸಾರಿಗೆ ನೀತಿ ರೂಪಿಸುವುದು ತುರ್ತು ಅಗತ್ಯವಾಗಿದೆ.
ಡಾ.ತಿಪ್ಪೇಸ್ವಾಮಿ ಕೆ.ಟಿ.
ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಬೆಂಗಳೂರು.

Comments
Post a Comment