ಪಠ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಅಳವಡಿಕೆಯಾಗಲಿ
ಶಾಲಾ ಮಕ್ಕಳ ಬ್ಯಾಗ್ ತೂಕ ಕಡಿಮೆ ಮಾಡಿ; ಡಾ.ತಿಪ್ಪೇಸ್ವಾಮಿ ಕೆ.ಟಿ.
ಶಾಲಾ ಪಠ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಅಳವಡಿಕೆ ಮಾಡಿಕೊಳ್ಳುವುದರಿಂದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಿದಂತಾಗುತ್ತದೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ನಿರ್ಣಾಯಕ ಕ್ರಮಕೈಗೊಂಡಂತಾಗುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ಅವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದರು. ಮಕ್ಕಳ ಹಕ್ಕುಗಳ ಬಗ್ಗೆ ಈಗಾಗಲೇ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಸಾಕಷ್ಟು ಅರಿವು ಮೂಡಿಸುತ್ತಿವೆ. ಆದರೆ ಅದು ಪಠ್ಯದ ವಿಷಯವಾದರೆ ಮಕ್ಕಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪುತ್ತದೆ ಎಂದರು.
ಸರ್ಕಾರ ಮಕ್ಕಳ ಶಾಲಾ ಬ್ಯಾಗ್ ತೂಕವನ್ನು ಕಡಿಮೆ ಮಾಡಿ ಸುತ್ತೋಲೆ ಹೊರಡಿಸಿದೆ. ಆದಾಗ್ಯೂ ಮಕ್ಕಳು ಕೆ.ಜಿಗಟ್ಟಲೆ ತೂಕದ ಬ್ಯಾಗ್ ಹೊತ್ತು ಬರುತ್ತಿರುವುದು ಆಯೋಗ ಗಮನಿಸಿದೆ. ಇದು ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು ಈ ಬಗ್ಗೆ ಇಲಾಖೆ ಸುತ್ತೋಲೆ ನೀಡಿದ್ದರೂ ಸೂಕ್ತ ಮೇಲ್ವಿಚಾರಣೆಯ ಕೊರತೆಯಿಂದ ಮಕ್ಕಳು ಸಮಸ್ಯೆ ಎದುರಿಸಬೇಕಾಗಿದೆ. ಅದರಲ್ಲೂ ಪ್ರತೀ ತಿಂಗಳ ಮೂರನೇ ಶನಿವಾರ ಬ್ಯಾಗ್ ಲೆಸ್ ದಿನವನ್ನು ಆಚರಿಸುವ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಸರ್ಕಾರ ನಿರ್ದೇಶನವಿದ್ದಾಗ್ಯೂ ಹಲವಾರು ಶಾಲೆಗಳಲ್ಲಿ ಇದು ಆಚರಿಸುತ್ತಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ತಿಳಿಸಿದರು.
ಮಕ್ಕಳ ರಕ್ಷಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು 2016ರಲ್ಲೇ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಯನ್ನು ಜಾರಿಗೊಳಿಸಿದ್ದರೂ ಅದು ಇನ್ನೂ ಕೂಡ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ರಾಜ್ಯದ ನೂರಾರು ಶಾಲೆಗಳಿಗೆ ಆಯೋಗ ಭೇಟಿಮಾಡಿದ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿದೆ. ಹಾಗಾಗಿ ರಾಜ್ಯದಲ್ಲಿನ ಎಲ್ಲಾ ಡಯಟ್ ಗಳ ಮೂಲಕ ಶಿಕ್ಷಕರಿಗೆ ಈ ಬಗ್ಗೆ ಗುಣಮಟ್ಟದ ತರಬೇತಿಯಾಗಬೇಕು, ಜೊತೆಗೆ ನಿಯಮಿತವಾಗಿ ಅದರ ಮೇಲ್ವಿಚಾರಣೆಯಾಗಬೇಕು ಎಂದರು.
ಸಭೆಯಲ್ಲಿ ಹಾಜರಿದ್ದ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಹೆಚ್.ಎನ್ ರವರು ಮಾತನಾಡಿ ಶಾಲೆಗಳಲ್ಲಿ ಪೋಕ್ಸೋ ಕಾಯಿದೆ ಅನುಷ್ಠಾನ ಮಾಡುವ ಹಾಗೂ ದೈಹಿಕ ದಂಡನೆ ನಿರ್ಮೂಲನೆ ಮಾಡುವ ಸಂಬಂಧ ಮಾರ್ಗಸೂಚಿ ರಚಿಸಿ ಇಲಾಖೆ ವತಿಯಿಂದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಮುಂದುವರೆದು ಇಂದಿನ ಸಭೆಯಲ್ಲಿನ ಚರ್ಚಿತ ವಿಷಯಗಳ ಬಗ್ಗೆ ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಿ ಸೂಕ್ತನಿರ್ದೇಶನ ನೀಡಲಾಗುವುದೆಂದರು. ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಸರ್ವಮಂಗಳಾ ಹಾಗೂ ಶ್ರೀಮತಿ ರಾಧಾ ರವರು ಸದರಿ ಸಭೆಯಲ್ಲಿ ಹಾಜರಿದ್ದರು.
.png)
Comments
Post a Comment