ದೇವದಾಸಿಯರ ಮಕ್ಕಳ ಮೇಲಿನ ತಾರತಮ್ಯ ಅಕ್ಷಮ್ಯ; ಡಾ.ತಿಪ್ಪೇಸ್ವಾಮಿ ಕೆ.ಟಿ.
ಬೆಂಗಳೂರು: ಮಾಜಿ ದೇವದಾಸಿಯರ ಮಕ್ಕಳು ವಿವಿಧ ರೀತಿಯ ಶೋಷಣೆ, ತಾರತಮ್ಯ ಹಾಗೂ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ. ನಾಗರಿಕ ಸಮಾಜವೊಂದರಲ್ಲಿ ಇದಕ್ಕೆ ಅವಕಾಶವಿರಬಾರದು, ಇಂತಹ ಮಕ್ಕಳ ವಿಕಾಸಕ್ಕಾಗಿ ಸರ್ಕಾರ ಮತ್ತು ಸಮಾಜ ಕ್ಷಿಪ್ರಗತಿಯಲ್ಲಿ ಕೆಲಸಮಾಡಬೇಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅಭಿಪ್ರಾಯಪಟ್ಟರು.
ನಿನ್ನೆ ಬೆಂಗಳೂರಿನಲ್ಲಿ ನಡೆದ "ಮಾಜಿ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಮಾಜಿ ದೇವದಾಸಿ ಮಹಿಳೆಯರ ಜಾಲಗಳೊಂದಿಗೆ ರಾಜ್ಯ ಮಟ್ಟದ ಸಮಾಲೋಚನಾ ಸಭೆ" ಯಲ್ಲಿ ಆಯೋಗದ ಮಾನ್ಯ ಸದಸ್ಯರಾದ ಡಾ.ತಿಪ್ಪೇಸ್ವಾಮಿ ಕೆ.ಟಿ. ರವರು ಭಾಗವಹಿಸಿ ದೇವದಾಸಿ ಮಕ್ಕಳ ಸಮಸ್ಯೆಗಳ ಕುರಿತು ತಾಯಂದಿರ ಅಹವಾಲುಗಳನ್ನು ಆಲಿಸಿದರು.
ಸದರಿ ಕಾರ್ಯಾಗಾರವನ್ನು ಚಿಲ್ಡ್ರೆನ್ ಆಫ್ ಇಂಡಿಯಾ ಹಾಗೂ ಇನ್ನಿತರೇ ಸಹಭಾಗಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಸಭೆಗೆ ಕರ್ನಾಟಕದ ೧೧ ಜಿಲ್ಲೆಗಳಿಂದ ಮಾಜಿ ದೇವದಾಸಿಯರು ಆಗಮಿಸಿ ತಮ್ಮ ಸಮಸ್ಯೆ ಹಾಗೂ ಸವಾಲುಗಳನ್ನು ಹಂಚಿಕೊಂಡರು ಮತ್ತು ಪರಿಹಾರದ ದಾರಿಗಳನ್ನು ವಕಾಲತ್ತು ತಂತ್ರದ ಮೂಲಕ ಪ್ರಯತ್ನಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಶಾಲೆ ಹಾಗೂ ಇನ್ನಿತರೇ ಶೈಕ್ಷಣಿಕ ಸಂಸ್ಥೆಗಳಲ್ಲಿ ದೇವದಾಸಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ತಾರತಮ್ಯವನ್ನು ತೊಡೆದುಹಾಕುವುದು, ವಸತಿ ನಿಲಯಗಳಲ್ಲಿ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು, ಸದರಿ ಮಕ್ಕಳ ಕೌಶಲ್ಯಾಭಿವೃಧಿಗೆ ಒತ್ತುಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು. ಇದಕ್ಕೆ ಪ್ರತಿಸ್ಪಂದಿಸಿದ ಆಯೋಗದ ಸದಸ್ಯರು ಈ ಕುರಿತು ಈಗಾಗಲೇ ಸರ್ಕಾರ ತೆಗೆದುಕೊಂಡ ಕ್ರಮಗಳ ಅನುಪಾಲನಾ ವರದಿಯನ್ನು ಪಡೆಯಲಾಗುವುದು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಗಬೇಕಿರುವ ಉಪಕ್ರಮಗಳ ಬಗ್ಗೆ ಸದರಿ ಇಲಾಖೆಗೆ ಸೂಕ್ತ ಶಿಪಾರಸ್ಸು ನೀಡುವ ಮೂಲಕ ದೇವದಾಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೈಜೋಡಿಸುವುದೆಂದರು.
ಸದರಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರವಾಗಿ ಶ್ರೀ ಶ್ರೀಧರ್ ರವರು ಭಾಗವಹಿಸಿದ್ದರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹೇಶ್ ಬಾಬು ಗೂ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಶ್ರೀ ವಿಜಯ್ ಕುಮಾರ್ , ದೇವದಾಸಿ ನೆಟ್ವರ್ಕ್ ನ ಶ್ರೀಮತಿ ಪಾರವ್ವ ಹಾಗೂ ಶ್ರೀಮತಿ ರೇಖಾ, ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಸಿ-ಗುಡ್ದ ಯೋಜನೆಯ ಡಾ.ವಾಸುದೇವ ಶರ್ಮ, ಶ್ರೀ ರಾಮಾಂಜನೇಯ, ಶ್ರೀಮತಿ ನಾಗಮಣಿ ಇನ್ನಿತರರು ಭಾಗವಹಿಸಿದ್ದರು.



Comments
Post a Comment